Monday, May 23, 2016

ಮಂಜಲ್ಲಿ ಮಂಜಾದ ಮಂಜು - ವಿವಾಹ ದಿನದ ಸಂಭ್ರಮದಲ್ಲಿ

ಮಗು ಹುಟ್ಟಿದಾಗ ಕಣ್ಣು  ಬಿಟ್ಟು ನೋಡಿದಾಗ ಯಾರು ಅದನ್ನು ಆತ್ಮೀಯತೆಯಿಂದ ಗುರುತಿಸುತ್ತಾರೋ ಅವರನ್ನೇ ತನ್ನ ಸರ್ವಸ್ವ ಎಂದುಕೊಂಡು ಬಿಡುತ್ತದೆ.

ಮಯೂರ ಚಿತ್ರದಲ್ಲಿ ಅಣ್ಣಾವ್ರು ಹೇಳುವಂತೆ "ನಾ ತಾಯಿ ಮಡಿಲಲ್ಲಿ ಬೆಳೆದ ಮಗುವಲ್ಲ.. ತಂದೆಗಿಂತಲೂ ಹೆಚ್ಚಾಗಿ ನೋಡಿಕೊಂಡ ಈಶ ಭಟ್ಟರೇ ನನ್ನ ತಂದೆ"

ಹೀಗೆ ಈ ರೀತಿಯ ಭಾವನೆ ಹೊತ್ತುಕೊಂಡೇ ಹುಟ್ಟಿದರೆನೋ ಅನ್ನುವಂಥಹ ಎಂಟ್ರಿ ಈ ಭೂಲೋಕಕ್ಕೆ ನನ್ನ ಅಮ್ಮನದು. ಹುಟ್ಟಿ ಎರಡು ವರ್ಷಗಳು ತುಂಬುವ ಮೊದಲೇ ತನ್ನ ಹೆತ್ತ ತಾಯಿಯನ್ನು ಕಳೆದುಕೊಂಡರು. ಎರಡು ವರ್ಷದ ಮಗುವಿಗೆ ತಾಯಿಯನ್ನು ನೋಡಿದ್ದ ನೆನಪೇ ಇಲ್ಲ. ತಾಯಿಯಿಲ್ಲದ ಮಗು ಎಂದು ಆ ಮಗುವನ್ನು ಅಮ್ಮನ ಅಜ್ಜ ಅಜ್ಜಿ ಹಾಸನದ ಬಳಿಯ ಕಿತ್ತಾನೆ ಎಂಬ ಹಳ್ಳಿಯಲ್ಲಿ ಸಾಕುತ್ತಾರೆ.

ನನ್ನ ಅಮ್ಮನ ಅಜ್ಜ, ಅರ್ಥಾತ್ ನನ್ನ ಮುತ್ತಜ್ಜ ಕಿತ್ತಾನೆಯ ರಾಮಯ್ಯ.. ರಾಮಯ್ಯನೋರು ಅಂದರೆ ಸುತ್ತ ಮುತ್ತಲ ಪ್ರದೇಶಗಳಲ್ಲಿ ಬಹಳ ಹೆಸರು ವಾಸಿ. ಹಿಡಿದ ಕಾರ್ಯವನ್ನು ಭಗೀರಥ, ವಿಶ್ವಾಮಿತ್ರ ಇವರಂತೆಯೇ ಛಲದಿಂದ ಸಾಧಿಸುವ ಮಹಾನ್ ವ್ಯಕ್ತಿತ್ವ. ತನ್ನ ಮಗಳನ್ನು ಕಳೆದುಕೊಂಡರೂ, ತನ್ನ ಮೊಮ್ಮಗುವಲ್ಲಿ ತನ್ನ ಮಗಳನ್ನು ಕಂಡುಕೊಂಡವರು ಇವರು.

ಇವರ ಧರ್ಮಪತ್ನಿ ಲಕ್ಷ್ಮಮ್ಮ, ಕಿತ್ತಾನೆಯಲ್ಲಿ ಅಕ್ಕಾ ಎಂದೇ ಹೆಸರಾಗಿದ್ದವರು. ಇವರ ತಾಯಿ ಮಮತೆ ಎಷ್ಟಿತ್ತು ಅಂದರೆ ತಾಯಿಯನ್ನು ಕಾಣದ ನನ್ನ ಅಮ್ಮ, ತನ್ನ ಅಜ್ಜಿಯನ್ನೇ ಅಮ್ಮ ಎಂದುಕೊಂಡು ಬೆಳೆದವರು. ಹಲವಾರು ವರ್ಷಗಳ ನಂತರವೇ ಅರಿವಾಗಿದ್ದು, ಈಕೆ ತನ್ನ ಅಜ್ಜಿ ಎಂದು, ಆ ಮಟ್ಟದ ಪ್ರೀತಿಯನ್ನು ಧಾರೆಯೆರೆಸಿಕೊಂಡು ಬೆಳೆದ ಮಗುವೆ ನನ್ನ ಅಮ್ಮ.

ನನ್ನ ಅಮ್ಮನಿಗೆ ಈ ಕಡೆ ರಾಮಯ್ಯ ಅವರ ವಂಶದ ಕುಡಿ ಎನ್ನುವ ಹೆಮ್ಮೆ ಒಂದು ಕಡೆ, ಇನ್ನೊಂದೆಡೆ ಈಗಲೂ ಹಾಸನದಲ್ಲಿ ಹಾಗೂ ಎಲ್ಲೇ ಹೋದರೂ ಶಂಖದ ದೇವರ ಭಟ್ಟರ ಕುಟುಂಬದ ಸದಸ್ಯರು  ಎಂದರೆ ಇಂದಿಗೂ ಓಹೋ  ಹೌದಾ ಎಂದು ನಮಸ್ಕರಿಸಿ ಮಾತಾಡುವಷ್ಟು ಗೌರವ, ಆದರ ಸಂಪಾದಿಸಿದ್ದ ದೇವರ ಭಟ್ಟರು ನಮ್ಮ ಅಮ್ಮನ ತಾತ.

ನಮ್ಮ ವಿಶ್ವ ಮಾವ ಹೇಳುತ್ತಾರೆ.. "ಪ್ರತಿ ದಿನ ನನ್ನ ತಾತನ ಚಿತ್ರಕ್ಕೆ ನಮಸ್ಕರಿಸಿ, ತಾತ ನಿನ್ನ ಆಶೀರ್ವಾದ ನಮ್ಮನ್ನು ಈ ಮಟ್ಟದಲ್ಲಿ ನಿಲ್ಲಿಸಿದೆ, ನಿನ್ನ ಮಕ್ಕಳು, ಮೊಮ್ಮಕ್ಕಳು ಎಲ್ಲರೂ ಸುಖವಾಗಿ ನೆಮ್ಮದಿಯಾಗಿ ಇದ್ದಾರೆ.. ಹೀಗೆ ನಮ್ಮನ್ನು ಕಾಪಾಡುತ್ತಿರು... ನೀನು ಸಾವಿರಾರು  ಮಂದಿಗೆ ಊಟೋಪಚಾರ ಹಾಕಿದೆ, ಸಲಹಿದೆ, ಅವರ ಹಾರೈಕೆ ನಮ್ಮನ್ನು ಕಾಪಾಡುತ್ತಿದೆ". ಎಂಥಹ ಅದ್ಭುತ ಮಾತು ನಮ್ಮ ಮಾವನದು.. ವಿಶ್ವ ಮಾವ.. ಸೂಪರ್

ಹೀಗೆ ಎರಡು ಅದ್ಭುತ ಕುಟುಂಬಗಳ ಮಿಲನದ ಸಂಗಮ ಸಂಭ್ರಮದಲ್ಲಿ ಬೆಳೆದ ಮಗು ನನ್ನ ಅಮ್ಮ..

*******

ಇನ್ನೊಂದು ಕಥೆ ಈ ಕಡೆ.. ಅಂದರೆ ಹಾಸನದ ಬಳಿಯ ಇನ್ನೊಂದು ಗ್ರಾಮ ಕೋರವಂಗಲ..

ಕಂಬಗಳ ಸಾಲಿನ ದೊಡ್ಡ ಮನೆ, ಮನೆಯಲ್ಲಿಯೇ ಕಳೆದು ಹೋಗುತ್ತಾರೇನೋ ಅನ್ನುವಷ್ಟು ವಿಶಾಲವಾದ ಮನೆ. ತಹಶೀಲ್ದಾರ್ ಅವರ ಕಚೇರಿಯಲ್ಲಿ.. ಯಾರ್ರೀ ಇದನ್ನು ಬರೆದದ್ದು. .. ಓಹೋ ಶಾನುಭೋಗರು ರಂಗಸ್ವಾಮಿಗಳೇ.. ಅದನ್ನು ಪರಿಶೀಲಿಸುವ ಅಗತ್ಯವೇ ಇಲ್ಲಾ ಬಿಡಿ ಅನ್ನುವಷ್ಟು ಕರಾರುವಾಕ್ ಬರವಣಿಗೆಯಲ್ಲಿ ಎತ್ತಿದ ಕೈ ಎಂದೇ ಹೆಸರಾಗಿದ್ದ ನನ್ನ ತಾತ ರಂಗಸ್ವಾಮಿ. ಅದ್ಭುತ ಆಂಗ್ಲ ಭಾಷಾ ಜ್ಞಾನ, ಸೊಗಸಾದ ಬರವಣಿಗೆಯ ಶೈಲಿ, ಕೊಡುಗೈ ದಾನಿ ನನ್ನ ತಾತ.

ಅವರ ಧರ್ಮಪತ್ನಿ ಸುಬ್ಬನರಸಮ್ಮ ಗಂಡನಿಗೆ ತಕ್ಕ ಹೆಂಡತಿ. ಹಳ್ಳಿಯಲ್ಲಿ ಎಲ್ಲರಿಗೂ ಚಿರಪರಿಚಿತ ಹೆಸರು. ಮಮತಾಮಯಿ ಎಂದೇ ಹೆಸರಾಗಿದ್ದವರು. ತಮ್ಮ ಮನೆಗೆ ಬಂದವರನ್ನು ಬರಿಗೈಯಲ್ಲಿ ಮತ್ತು ಬರಿ ಹೊಟ್ಟೆಯಲ್ಲಿ ಎಂದೂ ಕಳಿಸದ ಮಾತೃ ಹೃದಯಿ.

ಇಂಥಹ ಅದ್ಭುತ ದಂಪತಿಗಳಿಗೆ ಹುಟ್ಟಿದ್ದು ನನ್ನ ಅಪ್ಪ. ತನ್ನ ಅಮ್ಮನ ತಾಳ್ಮೆ, ಹಾಗೂ ಅಪ್ಪನ ಜ್ಞಾನ ಎರಡನ್ನೂ ಹೊತ್ತು ನಿಂತ ಇವರು, ತಾಳ್ಮೆ ಎಂದರೆ ಮಂಜು, ಮಂಜು ಅಂದರೆ ತಾಳ್ಮೆ ಎನ್ನುವಷ್ಟು ಹೆಸರಾಗಿದ್ದರು. "ಮಂಜು ಬಂದ ಉಶ್" ಎಂದರೆ ಸಾಕು ಮನೆಯಲ್ಲಿ ಸೂಜಿ ಬಿದ್ದರೂ ಕೇಳುವಷ್ಟು ನಿಶ್ಯಬ್ಧ

ನನ್ನ ಅಜ್ಜಿ ಹೇಳಿದ್ದು ನೆನಪು.."ಮಂಜಣ್ಣ ನೀನು ಭೂಮಿ ತೂಕದ ಮನುಷ್ಯ ಕಣೋ... ಆಡಿದರೆ ಒಂದೇ ಮಾತು.. ಆದರೆ ಖಡಕ್ ಮಾತು.."

******

ನನ್ನ ಅಮ್ಮನಿಗೆ ಮೊದಲಿಂದಲೂ ಸುಬ್ಬನರಸಮ್ಮ ಪರಿಚಯ.. ಬಾರೆ ನರಸು, ಹೋಗೆ ನರಸು ಎನ್ನುವಷ್ಟು ಸಲುಗೆ.. ನರಸು ನರಸು ಅಂತ ಆತ್ಮೀಯತೆಯಿಂದ ಕರೆಯುತ್ತಿದ್ದ ನನ್ನ ಅಮ್ಮ, ಹಲವಾರು ವರ್ಷಗಳ ನಂತರ ಅವರ ಮಗನ ಮಡದಿಯಾಗಿದ್ದು ಸುಂದರವಾದ ವಿಚಾರ..

ಅವರಿಗೆ ಇವರಿಗೆ  ಹೇಳಿ ಕೇಳಿ ತನ್ನ ಮಗನಿಗೆ ಹೆಣ್ಣು ಹುಡುಕಲು ಶುರುಮಾಡಿದಾಗ, ಸಿಕ್ಕಿದ್ದು ನನ್ನ ಅಮ್ಮ.  ಹೆಣ್ಣನ್ನು ನೋಡಲು ಬಂದಾಗ, ಆಸ್ಪತ್ರೆಯಲ್ಲಿ ಸಂಬಂಧಿಯೊಬ್ಬರನ್ನು ರಾತ್ರಿಯೆಲ್ಲಾ ನೋಡಿಕೊಂಡಿದ್ದು, ಬೆಳಿಗ್ಗೆ ಆಸ್ಪತ್ರೆಯಿಂದ ಸೀದಾ ಮನೆಗೆ ಬಂದಿದ್ದರು ನನ್ನ ಅಮ್ಮ. ಕೆದರಿದ ತಲೆಕೂದಲು, ಕೊಳೆಯಾಗಿದ್ದ ಸೀರೆ, ಒಂದು ರೀತಿಯಲ್ಲಿ ವಿಚಿತ್ರ ಎನ್ನುವಂಥಹ ಸನ್ನಿವೇಶದಲ್ಲಿ ನನ್ನ ಅಮ್ಮನ್ನು ನೋಡಿದ್ದು ನನ್ನ ಅಪ್ಪ.

ಮೊದಲ ನೋಟವೇ ಅದ್ಭುತ :-).. ಮೊದಲೇ ಮಾತು ಕಡಿಮೆ ನನ್ನ ಅಪ್ಪನದು... ಮನೆಗೆ ಬಂದ ಮೇಲೆ, ಹುಡುಗಿಯ ಬಗ್ಗೆ ಏನನ್ನೂ ಮಾತಾಡದೆ, ಕೆಲಸಕ್ಕೆ ಹೋದರು. ಯಾರೋ ಹೇಳಿದ್ದು ನನ್ನ ಅಪ್ಪನ ಕಿವಿ ಬಿತ್ತು . ಆ ಹುಡುಗಿಗೆ ಹುಚ್ಚು ಹಿಡಿಡಿದೆ, ಮದುವೆ ಆಗದಿದ್ದರೆ ಒಳ್ಳೆಯದು ಎನ್ನುವ ಮಾತು.. ಇದನ್ನೇ ತನ್ನ ಅಮ್ಮನಿಗೆ ಹೇಳಿದಾಗ.. "ನೋಡು ನಿನಗೆ ಮದುವೆ ಆಗಲು ಇಷ್ಟವಿಲ್ಲದಿದ್ದರೆ ಬೇಡ.. ತಾಯಿ ಇಲ್ಲದ ಆ ಮಗುವಿನ ಬಗ್ಗೆ ಏನೇನೋ ಹೇಳಬೇಡ.. " ಎಂದು ಬಯ್ದರು.

ನಂತರ.. ಅಪ್ಪ.. ಮದುವೆ ಆದರೆ ಈ ಹುಡುಗಿಯನ್ನೇ ಎಂದು ನಿರ್ಧರಿಸಿದರು..

ನನ್ನ ಅಪ್ಪನನ್ನು ಕಂಡರೆ, ದೇವರ ಭಟ್ಟರ ಇಡಿ ಕುಟುಂಬದಲ್ಲಿ ಗೌರವ, ಪ್ರೀತಿ, ಹಾಗೆಯೇ ಕಿತ್ತಾನೆಯಲ್ಲಿ ರಾಮಯ್ಯ ಅವರ ಕುಟುಂಬದಲ್ಲಿ ಕೂಡ ಮಂಜಣ್ಣ ಭಾವ ಎಂದರೆ ದೇವರನ್ನು ಕಂಡಷ್ಟು ಭಕ್ತಿ, ಗೌರವ.

೧೯೬೦ ಮೇ ತಿಂಗಳು ೨೩ನೆ ದಿನ ಈ ಇಬ್ಬರು ವಿವಾಹ ಬಂಧನದಲ್ಲಿ ಒಂದಾಗಿದ್ದ ದಿನ.

ಕಿತ್ತಾನೆಯ ಈ ಕೆಳಗಿನ ಚಿತ್ರದಲ್ಲಿ ಇರುವ ಮನೆಯಲ್ಲಿ ನನ್ನ ಅಪ್ಪ ಅಮ್ಮ ವಿವಾಹ ನೆರವೇರಿತು ..

ಕಿತ್ತಾನೆಯ ಈ ಮನೆಯಲ್ಲಿಯೇ ನನ್ನ ಅಪ್ಪ ಅಮ್ಮನ ವಿವಾಹ ನೆರವೇರಿದ್ದು 

ಅಪ್ಪ ಅಮ್ಮ ಮದುವೆ ಆಗಿ ೫೬ ವರ್ಷಗಳು ಸಾಗಿದ್ದರೆ.. ಈ ಎರಡು ಮನಗಳನ್ನು ಒಂದು ಮಾಡಿದ ಈ ಮನೆ ಅರವತ್ತಾರು ವಸಂತಗಳನ್ನು ಕಂಡಿದೆ .. ಎಂಥಹ ಅದ್ಭುತ ಸಂಗತಿ.. ವಾಹ್..

ಪೀಳಿಗೆಗಳನ್ನು ಕಂಡ ಸುಂದರ ಗೃಹ.. . ಅಲ್ಲಿನ ಬಾಗಿಲನ ಮೇಲೆ ಕಂಡ ದಿನಾಂಕ..
ಅಮ್ಮ ತೋರಿಸಿದರು 



ಮಂಜಿನಂಥಹ ವ್ಯಕ್ತಿತ್ವದ ಮಂಜುನಾಥ.. ವಿಶಾಲ ಮನಸ್ಸಿನ ವಿಶಾಲಾಕ್ಷಿ.. ಇಬ್ಬರೂ ನಮ್ಮ ಅಪ್ಪ ಅಮ್ಮ ಆಗಲೇಬೇಕು ಎಂದು ಹಠ ಹಿಡಿದು  ತಪಸ್ಸು ಮಾಡಿ ಪಡೆದಂಥಹ ಅನುಭವ..

ಇಂದು ಬೆಳಿಗ್ಗೆ ಹೀಗೆ ಸಂಧ್ಯಾವಂದನೆ ಮಾಡುತ್ತಿದ್ದಾಗ ನೆನಪಿನ ಪಠಲದಲ್ಲಿ ಮೂಡಿ ಬಂದದ್ದು ಹೀಗೆ ಅಕ್ಷರಗಳಾಗಿ ನುಗ್ಗಿ ಬಂದಿದೆ..

ಅಪ್ಪ ಅಮ್ಮ ವಿವಾಹ ದಿನಕ್ಕೆ ಐವತ್ತಾರು ವರ್ಷಗಳ ಸಂಭ್ರಮ..

ಅಪ್ಪ ಭೌತಿಕವಾಗಿ ಜೊತೆಯಲ್ಲಿಲ್ಲ ಆದರೆ ನಮ್ಮ ಮನೆದೊಳಗೆ, ಮನೆಯೊಳಗೇ ಸದಾ ಯಶಸ್ಸು ಕೋರುವ ಒಂದು ಆತ್ಮ ವಿಶ್ವಾಸದ ಆತ್ಮವಾಗಿ ನಿಂತಿದ್ದಾರೆ ನನ್ನ ಅಪ್ಪ..

ನಮ್ಮ ಅಮ್ಮ ಸ್ವಾಭಿಮಾನ, ಛಲದ ಪ್ರತೀಕ..

ನಾ ತಾಳ್ಮೆ ಬೇಕು ಎಂದುಕೊಂಡಾಗ ನೋಡುವುದು ನನ್ನ ಅಪ್ಪನ ಫೋಟೋ.. ಛಲ ಬೇಕು ಎಂದುಕೊಂಡಾಗ ಅಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ..

ಮಂಜುನಾಥನು ತಂದೆಯಾದರೆ.. ವಿಶಾಲಾಕ್ಷಿ ತಾಯಿ ಅಲ್ಲವೇ.. !!!!