"ಬೆಟ್ಟದಿಂದ ನೀರು ಜಾರಿ ದುಮುಕುತಿದೆ
ಸಾಗರ ಸೇರೋ ಆತುರ ತೋರಿ
ಗಾಳಿಗಿಂತ ವೇಗವಾಗಿ ಹರಿಯುತಲಿದೆ "
ಗಾಳಿಗಿಂತ ವೇಗವಾಗಿ ಹರಿಯುತಲಿದೆ "
ಅಣ್ಣಾವ್ರ ಹೊಸಬೆಳಕು ಚಿತ್ರದ ಹಾಡಿನ ಒಂದು ಸಾಲು.. ಹೌದು ಜೀವನವೇ ಹಾಗೆ ನೀರಿನ ಹಾಗೆ ಹರಿಯುತ್ತಲೇ ಇರಬೇಕು.. ಸಿಕ್ಕ ಪಾತ್ರಕ್ಕೆ, ಪಾತ್ರೆಗೆ ಹೊಂದಿಕೊಳ್ಳಲೇ ಬೇಕು.. ಹೊಂದಿಕೊಂಡಾಗ, ಹರಿಯುತ್ತಿದ್ದಾಗ ಜೀವನ.. ನಿಂತಾಗ "ಜೀ" ಹೋಗಿ ಬರಿ ವನವಾಗುತ್ತದೆ.
ಹಾಸನದ ಬಳಿಯ ಕೋರವಂಗಲ ಎಂಬ ಗ್ರಾಮದಲ್ಲಿ ಹುಟ್ಟಿದ ಮಂಜುನಾಥ, ಆ ಊರಿನ ಮುದ್ದಿನ ಮಗನಾಗಿಯೇ ಬೆಳೆದ. ಇಂದಿಗೂ ಆ ಊರಿನ ಆ ಕಾಲಮಾನದವರು ಸಿಕ್ಕಾಗ, "ಮಂಜಯ್ಯನ ಮಕ್ಕಳಾ ನೀವು . ನಿಮ್ಮ ಅಪ್ಪ ಬಹಳ ಮೃದು ಸ್ವಭಾವದವರು, ಹತ್ತು ಮಾತಿಗೆ ಒಂದೇ ಉತ್ತರ.. ಆದರೆ ಆ ಉತ್ತರ ಬಂದ ಮೇಲೆ ಬೇರೆ ಪ್ರಶ್ನೆಯೇ ಇರುತ್ತಿರಲಿಲ್ಲ" ಎಂದಾಗ. ಅರಿವಿಲ್ಲದೆ ನಮ್ಮ ಎದೆ ತುಂಬಿಬರುತ್ತದೆ.
ಎರಡು ವರ್ಷಗಳ ಹಿಂದೆ ಆ ಊರಿಗೆ ನಮ್ಮ ಪರಿವಾರ ಭೇಟಿ ಕೊಟ್ಟಾಗ ನನ್ನ ಅಣ್ಣನನ್ನು ನೋಡಿ "ನೀವು ಮಂಜಯ್ಯನ ಮಕ್ಕಳ.. ಅದಕ್ಕೆ ನಿಮ್ಮನ್ನು ನೋಡಿ ಮಂಜಯ್ಯ ಇದ್ದ ಹಾಗೆ ಇದ್ದಾರೆ ಅಂದುಕೊಂಡೆ.. ಅವರದೇ ಧ್ವನಿ ನಿನ್ನದು" ಎಂದಾಗ... ನನ್ನ ಅಣ್ಣ ಸ್ವಲ್ಪ ಹೊತ್ತು ಮೌನಿಯಾಗಿದ್ದ. ಮನದೊಳಗೆ ಸಂತಸ.. ಇನ್ನೊಂದು ಕಡೆ ತಂದೆಯಿಂದ ತನ್ನನ್ನು ಗುರುತಿಸಿದರು ಎನ್ನುವ ಹೆಮ್ಮೆ.. ಬಿಡಿ ಅದನ್ನು ಹೇಳೋಕೆ ಆಗೋಲ್ಲ.. ಅನುಭವಿಸಬೇಕು.
ಹೀಗೆ ಸಾಗಿದ್ದ ನನ್ನ ಅಪ್ಪನ ಬದುಕಿನ ನದಿ.. ಹಲವಾರು ಜಲಪಾತಗಳಲ್ಲಿ ಧುಮುಕಿ ಹರಿದು.. ಕಡಲನ್ನು ಸೇರುವ ತವಕ ಆ ನದಿಗೆ ಇತ್ತೋ ಅಥವಾ... ಆ ನದಿಯನ್ನು ತನ್ನ ಒಡಲಿಗೆ ಸೇರಿಸಿಕೊಳ್ಳುವ ಆತುರ ಕಡಲಿಗೆ ಇತ್ತೋ ಅರಿವಿಲ್ಲ.. ಆದರೆ ಆ ದಿನ ಬಂದೇ ಬಿಟ್ಟಿತು.
"ವೈದ್ಯೋ ನಾರಾಯಣೋ ಹರಿಃ" ಎಂಬಂತೆ.. ವೈದ್ಯರನ್ನು ಸಾಕ್ಷಾತ್ ದೇವರಿಗೆ ಹೋಲಿಸಿದ್ದಾರೆ ಅಥವಾ ದೇವರೇ ಎಂದು ಹೇಳಿದ್ದಾರೆ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ, ಸ್ವಾರ್ಥ ತುಂಬಿದ ಜಗತ್ತಿನಲ್ಲಿ, ವ್ಯಾಪಾರಿ ಯುಗದಲ್ಲಿ ಆಸ್ಪತ್ರೆಗಳು ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ ಆಗಿ, ರೋಗಿಗಳನ್ನು ಗಿರಾಕಿ ತರಹ ನೋಡಲು ಶುರುಮಾಡಿದಾಗ, ದುಡ್ಡು ಮಾಡುವುದಷ್ಟೇ ಜೀವನದ ಗುರಿ ಎಂದು ತಪ್ಪಾಗಿ ಅರ್ಥೈಸಿಕೊಂಡು ಹೆಜ್ಜೆ ಹಾಕಿದ ಹಲವಾರು ವೈದ್ಯಕೀಯ ಮೋಸಗಳನ್ನು ಕಂಡು, ಓದಿದ್ದರಿಂದ, ನಮ್ಮ ಅಪ್ಪ ತಮ್ಮ ಅಂತಿಮ ದಿನಗಳನ್ನು ಆಸ್ಪತ್ರೆಯ ನಾಲ್ಕು ಗೋಡೆಯ ಮಧ್ಯೇ ಕಳೆದಾಗ, ನಮಗೂ ಹಿಂಸೆಯಾಗುತ್ತಿತ್ತು, ಯಾರು ನಿಜಹೇಳುತ್ತಾರೆ? .. ಯಾರು ಸುಲಿಗೆ ಮಾಡುತ್ತಾರೆ? ಎಂದು.
ಒಂದು ಕಡೆ ತಮ್ಮ ಜೀವನವನ್ನೇ ನಮಗಾಗಿ ಮುಡುಪಿಟ್ಟ ತಂದೆ, ಇನ್ನೊಂದು ಕಡೆ ಹೇಗಾದರೂ ಸರಿ ಅಪ್ಪನ ಕಾಯಿಲೆಯನ್ನು ಗುಣಪಡಿಸಿ ಅವರನ್ನು ಮನೆಗೆ ಗುಣಮುಖರನ್ನಾಗಿ ಮಾಡಿಕೊಂಡು ತರುವ ನಮ್ಮ ಹಠ.. ಇದರ ಮಧ್ಯದಲ್ಲಿ ಡಾಕ್ಟರು ಅದೇನು ಮಾತ್ರೆ ಕೊಡುತ್ತಾರೋ, ಅದೇನೋ ಇಂಜೆಕ್ಷನ್ ಕೊಡುತ್ತಾರೋ, ಏನೂ ಅರಿವಾಗದೇ.. ಈ ಕಡೆ ಡಾಕ್ಟರನ್ನು ಬಯ್ಯಲೂ ಆಗದೆ, ಆ ಕಡೆ ಅದು ಚಿಕಿತ್ಸೆ ಅರ್ಥವಾಗದೆ ತೊಳಲಾಡುತ್ತಿದ್ದಾಗ ದೇವರಂತೆ ಬಂದವನು ನನ್ನ ಕಸಿನ್ ದೀಪು.
ಒಂದು ಕಡೆ ತಮ್ಮ ಜೀವನವನ್ನೇ ನಮಗಾಗಿ ಮುಡುಪಿಟ್ಟ ತಂದೆ, ಇನ್ನೊಂದು ಕಡೆ ಹೇಗಾದರೂ ಸರಿ ಅಪ್ಪನ ಕಾಯಿಲೆಯನ್ನು ಗುಣಪಡಿಸಿ ಅವರನ್ನು ಮನೆಗೆ ಗುಣಮುಖರನ್ನಾಗಿ ಮಾಡಿಕೊಂಡು ತರುವ ನಮ್ಮ ಹಠ.. ಇದರ ಮಧ್ಯದಲ್ಲಿ ಡಾಕ್ಟರು ಅದೇನು ಮಾತ್ರೆ ಕೊಡುತ್ತಾರೋ, ಅದೇನೋ ಇಂಜೆಕ್ಷನ್ ಕೊಡುತ್ತಾರೋ, ಏನೂ ಅರಿವಾಗದೇ.. ಈ ಕಡೆ ಡಾಕ್ಟರನ್ನು ಬಯ್ಯಲೂ ಆಗದೆ, ಆ ಕಡೆ ಅದು ಚಿಕಿತ್ಸೆ ಅರ್ಥವಾಗದೆ ತೊಳಲಾಡುತ್ತಿದ್ದಾಗ ದೇವರಂತೆ ಬಂದವನು ನನ್ನ ಕಸಿನ್ ದೀಪು.
ಸುಮಾರು ಹದಿನೈದು ದಿನಗಳು ಎಡಬಿಡದೆ ಡಾಕ್ಟರಗಳ ಹತ್ತಿರ ಮಾತಾಡೋದು, ಅವರು ಕೊಟ್ಟ ರಿಪೋರ್ಟ್ ಓದಿ ಅರ್ಥ ಮಾಡಿಕೊಂಡು, ಅದನ್ನು ನಮಗೆ ಅರಿವಾಗುವಂತೆ ವಿವರಿಸುವುದು, ಜೊತೆಯಲ್ಲಿ ನನ್ನ ಅಪ್ಪನ ದೇಹದಲ್ಲಿ ಆಗುತ್ತಿರುವ ಮಾರ್ಪಾಡು, ಅಥವಾ ವಯೋಸಹಜವಾಗಿ ಆಗುತ್ತಿರುವ ಹಿಂಸೆಗಳನ್ನು ಒಂದೊಂದಾಗಿ ವಿವರಿಸಿ, ಯಾವ ಚಿಕಿತ್ಸೆ ಹೇಗೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ವಿವರವಾಗಿ ತಿಳಿಸುತ್ತಿದ್ದ ದೀಪುವಿನಿಂದ ನಮಗೆ ವೈದ್ಯಕೀಯ ಶಾಸ್ತ್ರದಲ್ಲಿ ಮತ್ತು ವೈದ್ಯರ ಬಗ್ಗೆ ನಂಬಿಕೆ ಬಂದಿತ್ತು.. ಎಲ್ಲರೂ ಬರಿ ದುಡ್ಡುಮಾಡುವವರಲ್ಲ, ಕೆಲವರಲ್ಲಿ ಮಾನವೀಯತೆ ಜೀವಂತವಾಗಿ ಉಳಿದಿದೆ ಎನ್ನುವುದು ಸಾಬೀತಾಗುತ್ತಿತ್ತು.
ಅಂದ ಹಾಗೆ ನನ್ನ ಅಪ್ಪನಿಗೆ ಚಿಕೆತ್ಸೆ ನೀಡಿದ ವೈದ್ಯರ ಹೆಸರೇನು ಗೊತ್ತೇ "ಡಾ. ಮಂಜುನಾಥ್"!
ಅಂದ ಹಾಗೆ ನನ್ನ ಅಪ್ಪನಿಗೆ ಚಿಕೆತ್ಸೆ ನೀಡಿದ ವೈದ್ಯರ ಹೆಸರೇನು ಗೊತ್ತೇ "ಡಾ. ಮಂಜುನಾಥ್"!
ದೀಪುವಿಗೆ ನಮ್ಮ ಕಡೆಯಿಂದ ಕೋಟಿ ಕೋಟಿ ವಂದನೆಗಳು. ಇದೇ ಮಾತನ್ನು ಹೇಳಿದಾಗ.. ಅವನು ಹೇಳಿದ್ದು .. "ಅಣ್ಣಯ್ಯ,. ದೊಡ್ಡಪ್ಪನ ಆರೋಗ್ಯ ಸುಧಾರಿಸಬೇಕು.. ಅವರು ಮೊದಲಿನಂತಾಗಬೇಕು ಅಷ್ಟೇ ನನ್ನ ಆಸೆ.. ಈ ಥ್ಯಾಂಕ್ಸ್ ಅದು ಇದು ಎಲ್ಲಾ ನೀವೇ ಇಟ್ಟುಕೊಳ್ಳಿ" ಎಂದು ಒಂದು ನಗೆ ಬಿಸಾಕಿ.. "ನಡೀರಿ ಒಂದು ಕಾಫೀ ಹಾಕೋಣ" ಅಂತ ಹೊರಗೆ ಕರೆದುಕೊಂಡು ಬರುತ್ತಿದ್ದ.
ಹೀಗೆ ನಮಗೆ ಮತ್ತು ಡಾಕ್ಟರಿಗೆ ಒಂದು ಸೇತುವೆಯಾಗಿ ನಿಂತವನು ದೀಪು..
ನಮ್ಮ ಪ್ರಯತ್ನವನ್ನು ಮೀಟಿ.. ಆ ದೇವನು ಆಗಲೇ ಬೇರೆ ಕಾರ್ಯಕ್ರಮ ಇಟ್ಟುಕೊಂಡಿದ್ದರಿಂದ ಜನವರಿ ೨ ೨೦೧೨ ಸಂಜೆ ಸುಮಾರು ೫.೩೦ ಕ್ಕೆ ಅಣ್ಣ.... "ಸಾಕು ಮಕ್ಕಳಾ . ನಾ ಹೊರಟೆ" ಎಂದು ಹೊರಟೇಬಿಟ್ಟರು.
ಅಂದು ಸೋಮವಾರ.. ಶಿವನ ದಿನ.. ಇವರ ಹೆಸರು ಮಂಜುನಾಥ.. ಎಂಥಹ ಸಮಾಗಮ!!!
ಸಂಜೆಯಾಗಿತ್ತು, ಊರಿನಿಂದ ಬರುವವರು ಇದ್ದರು.. ಹಾಗಾಗಿ ಮಂಗಳವಾರ ಅಂತಿಮ ಸಂಸ್ಕಾರ ಅನ್ನುವ ತೀರ್ಮಾನಕ್ಕೆ ಬಂದೆವು.
ಮನೆಯಲ್ಲಿ ಮಂಗಳ ಕಾರ್ಯಗಳು, ಹೋಮ ಹವನಗಳು ನೆಡೆಯುತ್ತಲೇ ಇದ್ದದರಿಂದ.. ಹೋಮಕ್ಕೆ ಬೇಕಾದ ಸಮಿತ್ತು, ಆಜ್ಯದ ವಸ್ತುಗಳು (ಚಕ್ಕೆ, ಸೌದೆ ಇದ್ದವು).. ಮನೆಯ ಮುಂದೆ ಸಾಂಕೇತಿಕವಾಗಿ ಅಗ್ನಿದೇವನನ್ನು ಇರಿಸಬೇಕಿತ್ತು.. ಮತ್ತೆ ಅದೇ ಅಗ್ನಿಯಿಂದಲೇ ಅಂತ್ಯ ಸಂಸ್ಕಾರವಾಗಬೇಕಿತ್ತು. ಹಾಗಾಗಿ ಸೌದೆ ಬೇಕು ಎಂದಾಗ.. ಕಳೆದ ಎಂಟು ತಿಂಗಳ ಹಿಂದೆ ತನ್ನ ಮೊಮ್ಮಗನ ಉಪನಯನಕ್ಕೆ ತಂದಿದ್ದ ಸೌದೆಗಳನ್ನು ಮಹಡಿಯ ಮೇಲೆ ಇಟ್ಟು ಒಣಗಿಸಿ, ಕಟ್ಟಿ ತೆಗೆದಿಟ್ಟಿದ್ದರು ನನ್ನ ಅಪ್ಪ. ಒಂದು ಒಂದು ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದರು ಅನ್ನಿಸುತ್ತದೆ.
ಅದನ್ನೇ ಮನೆಯ ಮುಂದೆ ಇಟ್ಟು ಅಗ್ನಿದೇವನನ್ನು ಕೂರಿಸಿದೆವು. ಎಲ್ಲಾ ಕಟ್ಟಿಗೆಗಳು ಉಪಯೋಗಿಸಬೇಕೋ.. ಅಥವಾ ವ್ಯರ್ಥವಾಗುತ್ತದೆಯೋ ಎನ್ನುವ ಕೆಲವು ಮಾತುಗಳು ಬಂದರೂ ಕೂಡ... ನಾವು ಮೂವರು ಅಣ್ಣ ತಮ್ಮಂದಿರದ್ದು ಒಂದೇ ಮಾತಾಗಿತ್ತು.. ಬೆಲೆಬಾಳುವ ಅಪ್ಪನ ಮುಂದೆ.. ಕೆಲವೇ ರೂಪಾಯಿಗಳಿಗೆ ಸಿಗುವ ಈ ಕಟ್ಟಿಗೆ ಏನೂ ಅಲ್ಲ.. ಬೇಕಾದರೆ ಇನ್ನಷ್ಟು ತರೋಣ.. ತಲೆ ಕೆಡಿಸಿಕೊಳ್ಳಬೇಡಿ ಎಂದು ಅಲ್ಲಿದ್ದವರಿಗೆ ಹೇಳಿದೆವು.
ಖಾಲಿಯಾಗಿದ್ದ ಹಣೆಗೆ ವಿಭೂತಿಯನ್ನು ಇಟ್ಟು... ಒಂದು ಹೂವಿನ ಹಾರವಿದ್ದರೆ? ಎನ್ನುವ ಗುಸುಗುಸು ಬಂದಾಗ.. ನನ್ನ ಪ್ರಾಣ ಸ್ನೇಹಿತ ಶಶಿ ಅಷ್ಟೊತ್ತಿಗೆ ಬಂದಿದ್ದ.. ತನ್ನೊಡನೆ ಕೈಯಲ್ಲಿ ಹಾರ ತಂದಿದ್ದ.. "ಶಶಿ ನೀನೇ ಹಾರ ಹಾಕಿಬಿಡು".. ಎಂದು ಹೇಳಿದೆ.
ಅಪ್ಪನ ಭೌತಿಕ ದೇಹಕ್ಕೆ ಹಾರವೂ ಬಂದಿತು.
ಅಪ್ಪನ ಭೌತಿಕ ದೇಹಕ್ಕೆ ಹಾರವೂ ಬಂದಿತು.
ಮಾರನೇದಿನ ಮಂಗಳವಾರ.. ಬೆಳಿಗ್ಗೆಯಿಂದ ಸಂಸ್ಕಾರದ ಶಾಸ್ತ್ರಗಳು ಶುರುವಾದವು.
ನಮಗೆ ಹೊಸತು (ಹುಟ್ಟು ಸಾವು ಯಾರಿಗೆ ಹೊಸತಲ್ಲ ಹೇಳಿ). ಶಾಸ್ತ್ರಿಗಳು ಹೇಗೆ ಹೇಳುತ್ತಿದ್ದರೋ ಅವರ ಸೂಚನೆಗಳನ್ನು ಪಾಲಿಸುತ್ತಿದ್ದೆವು. ಮನೆಯ ಮುಂದೆ ಅಪ್ಪನ ದೇಹವನ್ನು ಮಲಗಿಸಿ..ಸ್ನಾನ ಮಾಡಿಸಿ.. ಎಲ್ಲರೂ ತಮ್ಮ ಅಂತಿಮ ನಮನಗಳನ್ನು, ಗೌರವಗಳನ್ನು ಸಲ್ಲಿಸಿದ ಮೇಲೆ, ಅಂತಿಮ ಯಾತ್ರೆಗೆ ಸಿದ್ಧವಾದೆವು.
ಸ್ನಾನ ಮಾಡಿಸಿದ್ದರಿಂದ, ಅಪ್ಪನ ದೇಹವೆಲ್ಲ ಒದ್ದೆಯಾಗಿತ್ತು.. ನಾವು ಒದ್ದೆ ವಸ್ತ್ರವನ್ನು ತೊಟ್ಟಿದ್ದರಿಂದ, ನಾವು ನಡುಗುತ್ತಿದೆವು, ಆದರೆ ಅದು ಆ ಜನವರಿಯ ಚಳಿಯ ನಡುಕವಲ್ಲ ಬದಲಿಗೆ ಅಪ್ಪನ ಭೌತಿಕ ದೇಹದ ಜೊತೆಯಲ್ಲಿ ಕೂತಾಗ ಆಗುವ ಒಂದು ರೀತಿಯ ತಳಮಳದ ನಡುಕ. ನನ್ನ ತಮ್ಮ ಅಣ್ಣನಿಗೆ (ಅಪ್ಪನಿಗೆ) ಚಳಿ ಆಗುತ್ತೆ ಕಣೋ ಎಂದಾಗ.. ನಾವು ಸ್ನಾನ ಮಾಡಿದ್ದರಿಂದ ದೇಹದಿಂದ ನೀರು ತೊಟ್ಟಿಕ್ಕುತ್ತಿತ್ತು.. ಕೆಲವು ನೀರಿನ ಬಿಂದುಗಳು ನಮ್ಮ ಕಣ್ಣಿಂದಲೂ ಜಾರಿತ್ತೇನೋ ಗೊತ್ತಿಲ್ಲ :-(
ಬನಶಂಕರಿ ಚಿತಾಗಾರ ತಲುಪಿದೆವು. ಅಲ್ಲಿ ಮತ್ತಷ್ಟು ಅಂತಿಮ ಶಾಸ್ತ್ರಗಳು ಮತ್ತು ಕೇಶಮುಂಡನ.. ಒಬ್ಬೊಬ್ಬರಿಗೆ ಒಂದು ನೂರು ರೂಪಾಯಿ ಎಂದಾಗ ಹೌದೇ ಎಂದರು ಇನ್ನೊಂದು ಅಂತಿಮ ಸಂಸ್ಕಾರಕ್ಕೆ ಬಂದವರು.. ಆಗ ಅದಕ್ಕೆ ಇನ್ನೊಬ್ಬ ಕೊಟ್ಟ ಉತ್ತರ ತಲೆ ಬೋಳಿಸಿದ ಮೇಲೆ.. ಕನಿಷ್ಠ ಮೂರು ನಾಲ್ಕು ತಿಂಗಳು ಬೇಕು ಮತ್ತೆ ಕೂದಲು ಹುಲುಸಾಗಿ ಬೆಳೆಯಲು ಅಲ್ಲಿಯ ತನಕ ಕ್ಷೌರಿಕನ ಬಳಿ ಹೋಗುವುದು ಉಳಿಯುತ್ತಲ್ಲ.. ! ಏನು ಹೇಳಲಿ ಇದಕ್ಕೆ.. !
"ಬರುವಾಗ ಬೆತ್ತಲೆ
ಹೋಗುವಾಗ ಬೆತ್ತಲೆ
ಬಂದು ಹೋಗುವ ನಡುವೆ ಕತ್ತಲೆ
ಭಕ್ತಿಯ ಬೆಳಕು ಬಾಳಿಗೆ ಬೇಕು
ಮುಕ್ತಿಗೆ ವಿಠಲನ ಕೊಂಡಾಡಬೇಕು"
ಶಾಸ್ತ್ರೀಗಳು ಹೇಳುತ್ತಿದ್ದರು "ದೇಹಕ್ಕೆ ಯಾವುದೇ ಬಂಧನವಿರಬಾರದು.. ಜನಿವಾರದಿಂದ ಹಿಡಿದು, ಉಡುದಾರ, ಕಾಲಿಗೆ ಕಟ್ಟಿದ್ದ ದಾರ, ಕೈಗೆ ಕಟ್ಟಿದ ದಾರ, ತೊಟ್ಟ ಬಟ್ಟೆ ಎಲ್ಲವನ್ನು ತೆಗೆದು.. ಬಿಳಿ ವಸ್ತ್ರವನ್ನು ತೊಡಿಸಿ" ಎಂದರು. ನಮಗೆ ಜನುಮನೀಡಿ, ನಮ್ಮ ಹೊಟ್ಟೆ ಬಟ್ಟೆಗೆ ದಾರಿ ಮಾಡಿಕೊಟ್ಟ ಅಪ್ಪನ ದೇಹವನ್ನು ಎಲ್ಲಾ ಬಂಧನದಿಂದ ಮುಕ್ತಿಗೊಳಿಸುವ ಈ ಸಮಯ ನಿಜಕ್ಕೂ ಎಂಥಹ ಹೃದಯವನ್ನು ಕರಗಿಸುತ್ತಿತ್ತು.
ಅಣ್ಣ, ತಮ್ಮ ಒಂದೇ ಸಮನೆ ಅಳುತ್ತಿದ್ದರು.. ನಾ ಅಳಬೇಕು ಎಂದು ಅನಿಸಿದರೂ, ಅಳಲಾಗುತ್ತಿಲ್ಲ.. ನಿಶ್ಚಲವಾಗಿ ಮಲಗಿದ್ದ ಅಪ್ಪನ ಮೊಗವನ್ನೇ ನೋಡುತ್ತಿದ್ದೆ. ಹಲವಾರು ದಿನಗಳಿಂದ ಓಡಾಡಿ ನಮ್ಮೆಲ್ಲರ ಕಾಲುಗಳು ಬಸವಳಿದಿದ್ದವು. ನಿತ್ರಾಣಗೊಂಡಿದ್ದ ದೇಹ, ದೈಹಿಕವಾಗಿ, ಮಾನಸಿಕವಾಗಿ ಜರ್ಜರಿತವಾಗಿದ್ದವು. ಆದರೆ ವಿಧಿಯಿಲ್ಲ ತಡೆದುಕೊಳ್ಳಲೇ ಬೇಕು.
ಚಿತಾಗಾರದಲ್ಲಿ ಆಗಲೇ ಬಂದಿದ್ದ ದೇಹಗಳಿಗೆ ಶವಸಂಸ್ಕಾರವಾಗಬೇಕಿದ್ದರಿಂದ, ಸರತಿಯಲ್ಲಿ ನಿಲ್ಲಬೇಕಿತ್ತು.
ಒಂದು ಅರ್ಧಘಂಟೆ.. ಆಮೇಲೆ ನಿಮ್ಮದೇ ಎಂದು ಅಲ್ಲಿನ ಸಿಬ್ಬಂದಿಯೊಬ್ಬರು ಹೇಳಿದಾಗ.. ಮೆಲ್ಲಗೆ ನನ್ನ ಅಪ್ಪನ ಸುತ್ತಾ ನಿಂತಿದ್ದ ಬಂಧು ಬಾಂಧವರು, ಸ್ನೇಹಿತರು ಹೊರಗೆ ಹೋಗಿ ನಿಂತರು.
ನನ್ನನ್ನು ಯಾರೋ ಹಿಡಿದುಕೊಂಡ ಅನುಭವ.. ನಾ ಸುಮ್ಮನೆ ಅಪ್ಪನ ಮೊಗವನ್ನೇ ನೋಡುತ್ತಾ ನಿಂತಿದ್ದೆ.. ಅಲ್ಲಿ ಎಷ್ಟು ಹೊತ್ತು ನಿಂತಿದ್ದೆನೋ ಅರಿವಿಲ್ಲ, ನನ್ನ ಕಾಲುಗಳು ಸೋಲುತ್ತಿದ್ದವು, ಕಣ್ಣುಗಳು ಒಣಗಿಹೋದ ಬಾವಿಯಾಗಿದ್ದವು, ಅಪ್ಪ ನನ್ನ ಹತ್ತಿರ ಮಾತಾಡುತ್ತಿರುವ ಅನುಭವ.. ಹಾಡು ಹೇಳು ಎಂದು ನನ್ನ ಹತ್ತಿರ ಹೇಳಿದ ಅನುಭವ.. ಉತ್ಪ್ರೇಕ್ಷೆಯಲ್ಲ.. ಇದು ನಾ ಅಂದು ಅನುಭವಿಸಿದ ಅನುಭವ..
ಸುಮಾರು ಇಪ್ಪತ್ತು ಇಪ್ಪತ್ತೈದು ನಿಮಿಷ ಅಲ್ಲಿಯೇ ನಿಂತಿದ್ದೆ..
"ಹೆಂಡತಿ ಮಕ್ಕಳು ಬಂಧು ಬಳಗ
ರಾಜಯೋಗಗಳ ವೈಭೋಗ
ಕಾಲನು ಬಂದು ಬಾ ಎಂದಾಗ
ಎಲ್ಲವೂ ಶೂನ್ಯ ಚಿತೆ ಏರುವಾಗ
ಎಲ್ಲಾ ಶೂನ್ಯ ಎಲ್ಲವೂ ಶೂನ್ಯ
ಉಳಿಯುವುದೊಂದೇ ದಾನ ಧರ್ಮ ತಂದ ಪುಣ್ಯ
ನಾನೇ ಎಂಬ ಭಾವ ನಾಶವಾಯಿತು
ನೀನೇ ಎಂಬ ನೀತಿ ನಿಜವಾಯಿತು"
ನನ್ನ ಅಪ್ಪನ ತುಂಬಾ ಇಷ್ಟವಾದ ಚಿತ್ರ "ದೇವರ ದುಡ್ಡು" ಚಿತ್ರದ ಹಾಡಿನ ಸಾಲು ನನಗೆ ಅರಿವಿಲ್ಲದಂತೆ ಮನದಲ್ಲಿ ಮೂಡತೊಡಗಿತು. ಅಲ್ಲಿ ನಿಂತಿದ್ದ ಕ್ಷಣಗಳು ಬರಿ ಈ ಹಾಡೇ ತುಟಿಯಮೇಲೆ..
ಸಮಯವಾಗಿತ್ತು.. ನಿಧಾನವಾಗಿ "ಗೋವಿಂದ ನಾರಾಯಣ" ಎಂದು ಹೇಳುತ್ತಾ ಅಪ್ಪನ ಭೌತಿಕ ದೇಹವನ್ನು ಚಿತಾಗಾರದ ಕಡೆಗೆ ಹೊತ್ತು ನೆಡೆದೆವು. ವಿದ್ಯುತ್ ಚಿತಾಗಾರ.. ಕಣ್ಣು ಮುಚ್ಚಿ ಕಣ್ಣು ತೆಗೆಯುವುದರ ಒಳಗೆ.. ಬೂದಿಯಾಗಿ ಹೋಗುತ್ತದೆ.
ಮಾರನೇ ದಿನ ಆ ಚಿತಾಭಸ್ಮವನ್ನು ತೆಗೆದುಕೊಂಡು, ಅದಕ್ಕೆ ಸಲ್ಲಬೇಕಾದ ಶಾಸ್ತ್ರಗಳನ್ನು ಮಾಡಿಕೊಂಡು, ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಡೆಗೆ ಹೊರಟೆವು.
ಅಪ್ಪ ಅಮ್ಮನಿಗೋಸ್ಕರ ಕೊಂಡ ನನ್ನ ಕಾರು, ಅಪ್ಪ ಒಂದೆರಡು ಬಾರಿ ಮಾತ್ರ ಅವರ ಆಶೀರ್ವಾದದಿಂದ ಬಂದ ಕಾರಿನಲ್ಲಿ ಕೂತಿದ್ದರು ಅಷ್ಟೇ. ಅವರನ್ನು ಕಾರಿನಲ್ಲಿ ಓಡಾಡಿಸಬೇಕು ಎಂಬ ಆಸೆ ಆಸೆಯಾಗಿಯೇ ಉಳಿಯಿತು. ಆದರೆ ಅಪ್ಪನ ಚಿತಾಭಸ್ಮವನ್ನು ಹೊತ್ತು ಹೊರಟ ನನ್ನ ಕಾರು ನನಗೆ ಹೇಳಿತು
"ಶ್ರೀ.. ನೀ ನನ್ನ ಯಜಮಾನ.. ಆದರೆ ನಿನ್ನ ಯಜಮಾನನ ಅಂತಿಮ ಗುರುತನ್ನು ಹೊತ್ತು ಸಾಗುವ ಗೌರವ ನನಗೆ ಕೊಟ್ಟಿದ್ದೀಯ.. ನಿನಗೆ ಕೋಟಿ ನಮನಗಳು.. ನಿನ್ನ ಯಜಮಾನನ ಸವಿ ನೆನಪಿಗಾಗಿ ನಿನ್ನ ಕಾರಿಗೆ ಅವರ ಹೆಸರನ್ನೇ ನಾಮಕರಣ ಮಾಡು" ಎಂದು ಹೇಳಿತು.. ಅದರಂತೆ ಅಪ್ಪನ ಮುಗಿಯುವ ಹೊತ್ತಿಗೆ ಕಾರಿಗೆ ನಾಮಕರಣವೂ ಆಯಿತು
"ಮಂಜುಲಾಕ್ಷಿ ಅನುಗ್ರಹ"
"ಶ್ರೀ.. ನೀ ನನ್ನ ಯಜಮಾನ.. ಆದರೆ ನಿನ್ನ ಯಜಮಾನನ ಅಂತಿಮ ಗುರುತನ್ನು ಹೊತ್ತು ಸಾಗುವ ಗೌರವ ನನಗೆ ಕೊಟ್ಟಿದ್ದೀಯ.. ನಿನಗೆ ಕೋಟಿ ನಮನಗಳು.. ನಿನ್ನ ಯಜಮಾನನ ಸವಿ ನೆನಪಿಗಾಗಿ ನಿನ್ನ ಕಾರಿಗೆ ಅವರ ಹೆಸರನ್ನೇ ನಾಮಕರಣ ಮಾಡು" ಎಂದು ಹೇಳಿತು.. ಅದರಂತೆ ಅಪ್ಪನ ಮುಗಿಯುವ ಹೊತ್ತಿಗೆ ಕಾರಿಗೆ ನಾಮಕರಣವೂ ಆಯಿತು
"ಮಂಜುಲಾಕ್ಷಿ ಅನುಗ್ರಹ"
ಪಶ್ಚಿಮವಾಹಿನಿಯಲ್ಲಿ ಅಪ್ಪನ ಚಿತಾಭಸ್ಮ ಲೀನವಾದಮೇಲೆ.. ಅಪ್ಪ ಪಂಚಭೂತಗಳಲ್ಲಿ ಒಂದಾದರೂ.. ಗಾಳಿಯಲ್ಲಿ, ನೀರಿನಲ್ಲಿ ನಮ್ಮ ಜೊತೆಯಲ್ಲಿ ಬಂದು.. ನಮ್ಮ ಮನದೊಳಗೆ ಮನೆ ಮಾಡಿಕೊಂಡು ಕೂತುಬಿಟ್ಟರು. ಇಂದು ಅಪ್ಪನನ್ನು ನೋಡಬೇಕೆಂದರೆ ಅವರ ಫೋಟೋ ನೋಡುವುದಿಲ್ಲ.. ಬದಲಿಗೆ ನನ್ನ ಕುಟುಂಬದವರು ಕನ್ನಡಿಯಲ್ಲಿ ನಮ್ಮನ್ನು ನೋಡಿಕೊಳ್ಳುತ್ತೇವೆ.. ಅಲ್ಲಿ ಅಪ್ಪ ಕಾಣುತ್ತಾರೆ..
ಹೂವಿನಂಥಹ ಮನಸ್ಸಿನ ಅಪ್ಪನಿಗೆ ಅರ್ಪಿತಾ!!! |
"ಮಕ್ಕಳಾ ಸೂಪರ್ ನನ್ನ ಮಕ್ಕಳು ಕಣೋ ನೀವೆಲ್ಲಾ.. ನಿಮ್ಮ ಖುಷಿ ನನ್ನ ಖುಷಿ.." ಎಂದು ಹೇಳುವ ಅವರ ಮಾತುಗಳು ನಮ್ಮ ಕಿವಿಯಲ್ಲಿ, ಹೃದಯದಲ್ಲಿ ಮಾರ್ದನಿಯಾಗುತ್ತಲೇ ಇರುತ್ತದೆ.
ಜೀವನದ ಆರಂಭಿಕ ಮಜಲುಗಳು!!! |
ಕೋರವಂಗಲದ ಪುಟ್ಟ ಗ್ರಾಮದ ದೊಡ್ಡ ಮನೆಯಿಂದ.. ಕಾವೇರಿ ಮಾತೆಯ ಮಡಿಲಲ್ಲಿ ಸೇರಿ....ಜೀವನದ ಅಂತಿಮ ಕಡಲನ್ನುಸೇರಲು ಹೊರಟ ಅಪ್ಪನ ಬದುಕು ಒಂದೊಂದೇ ಪುಟದಲ್ಲಿ ತೆರೆದುಕೊಳ್ಳುತ್ತದೆ.. ಈ ಅಂಕಣದಲ್ಲಿ!