ಮಂಜಾಗುತ್ತದೆ.. ನೀರಾಗುತ್ತದೆ.. ಆವಿಯಾಗುತ್ತದೆ.. ಮತ್ತೆ ಮಂಜಾಗುತ್ತದೆ.. ಈ ಚಕ್ರದಲ್ಲಿ ಕಲಿತ ಪಾಠಗಳೆಷ್ಟೋ..
ಕೋರಮಂಗಲ ಎನ್ನುವ ಒಂದು ಪುಟ್ಟ ಹಳ್ಳಿಯಲ್ಲಿ ಶ್ರೀಮತಿ ಮತ್ತು ಶ್ರೀ ಸುಬ್ಬನರಸಮ್ಮ ಮತ್ತು ರಂಗಸ್ವಾಮಿ ದಂಪತಿಗಳಿಗೆ ಜನಿಸಿದ ಮಂಜುನಾಥ ಎನ್ನುವ ಈ ಕಂದಾ ಹುಟ್ಟಿದಾಗ.. ಇವರು ಸದ್ದಿಲ್ಲದೇ ಸದ್ದು ಮಾಡುತ್ತಾರೆ ಎಂದು ಯಾರೂ ಭವಿಷ್ಯ ನುಡಿದಿರಲಿಲ್ಲ..
ನಾ ಕಂಡ ಅವರ ಸುಮಾರು ೩೫ ರಿಂದ ೩೯ ವರ್ಷಗಳ ಅವರ ಜೀವನಗಾಥೆಯನ್ನು ಅಕ್ಷರದಲ್ಲಿಡಬೇಕು ಎಂದು ಕೊಂಡಾಗ.. ನೆರವಾಗಿದ್ದು ಅಮ್ಮ.. ಐದು ದಶಕಗಳ ವೈವಾಹಿಕ ಜೀವನ ನೆಡೆಸಿದ ಅಮ್ಮ, ಅವರ ಜೊತೆ ಕಳೆದ ಸುಖ ದುಃಖದ ಕ್ಷಣಗಳನ್ನು ಆಗಾಗ ನನ್ನ ಮುಂದೆ ತೆರೆದಿಡುತ್ತಿದ್ದಾಗ ಅನಿಸಿದ್ದು.. ಇಂತಹ ಸದ್ದಿಲ್ಲದೇ ಸ್ಫೂರ್ತಿ ನೀಡುವ ಜೀವಿಯ ಬದುಕನ್ನು ಅಕ್ಷರದೊಳಗೆ ಹಿಡಿದಿಡಬೇಕು ಎನ್ನುವ ಹಂಬಲ ಹುಟ್ಟಿದ್ದು ೨೦೧೦ ರಲ್ಲಿ..
ಅಮ್ಮ ಅಪ್ಪ ಒಂದಾಗಿ ಐದು ದಶಕಗಳ ಸುವರ್ಣ ಸಂಭ್ರಮ ನೆಡೆಸಿದ ಮೇಲೆ ಅನಿಸಿತು.. ಆದರೆ ಅದು ಕುಂಟುತ್ತಾ, ತೆವಳುತ್ತ, ನನ್ನ ಇತರ ಚಟುವಟಿಕೆಗಳಲ್ಲಿ ಇಣುಕುತ್ತಿತ್ತೇ ಹೊರತು ಒಂದು ಸಮಗ್ರ ದಾಖಲೆ ಎಣಿಸಿರಲಿಲ್ಲ.. ಅದಕ್ಕಾಗಿಯೇ ಒಂದು ದಿನ ಹಠ ತೊಟ್ಟಂತೆ ಈ ಬ್ಲಾಗ್ ಶುರು ಮಾಡಿದೆ.. ಆದರೂ ಬೇರೆ ಅಂಕಣದಲ್ಲಿ ಲೇಖನಗಳು ನುಗ್ಗಿದ ಹಾಗೆ ಈ ಅಂಗಳದಲ್ಲಿ ಮೂಡಲು ಸಾಧ್ಯವಾಗುತ್ತಿರಲಿಲ್ಲ..
ತುಂಬಾ ಹತ್ತಿರದವರ ಹತ್ತಿರ ಈ ಮಾತುಗಳನ್ನು ಹೇಳಿದಾಗ.. ಅಣ್ಣ ಖಂಡಿತ ಬರೆಯಿರಿ.. ಅಪ್ಪನೇ ನಿಮಗೆ ಸ್ಫೂರ್ತಿ . ಅವರ ಬಗೆಗಿನ ವಿಷಯಗಳನ್ನು ನಿಮ್ಮದೇ ಶೈಲಿಯಲ್ಲಿ ಓದಬೇಕೆಂಬ ಹಂಬಲವಿದೆ.. ಕಾಯುತ್ತಿರುತ್ತೇವೆ ಎಂದು ಹುರಿದುಂಬಿಸಿದರು..
ಆದರೂ ಯಾಕೋ ಕೈಗೂಡುತ್ತಿರಲಿಲ್ಲ..
ಒಂದು ದಿನ ಅಣ್ಣನ (ಅಪ್ಪನನ್ನು ಅಣ್ಣ ಎನ್ನುವುದು ನಮ್ಮ ಪರಿವಾರದಡಲ್ಲಿ ರೂಡಿ) ಫೋಟೋ ನೋಡಿ.. ಕೆಲಸಕ್ಕೆ ಹೊರಟಾಗ.. ನೀ ಬರೆಯುತ್ತೀಯ.. ಆ ಮೌನದಲ್ಲಿಯೇ ಬರೆಯುತ್ತೀಯಾ ಎಂದ ಹಾಗೆ ಕೇಳಿಸಿತು.. ಭ್ರಮೆಯೋ ಏನೋ ಅಂತ ಸುಮ್ಮನೆ ಆಫೀಸಿಗೆ ಹೋದೆ.. ಆದರೆ ಅಂದು ದಿನಪೂರ್ತಿ ಮೌನವಾಗಿಯೇ ಇದ್ದೆ..
ನನ್ನ ಪ್ರಾಥಮಿಕ ಶಾಲಾದಿನಗಳ ಟೀಚರ್ ಪುಷ್ಮ ಮೇಡಂ ನನ್ನ ಆರೋಗ್ಯ ಮತ್ತು ಕಾಳಜಿ ತಿಳಿದುಕೊಳ್ಳಲು ಕರೆ ಮಾಡಿದ್ದರು.. ಆಗ "ಶ್ರೀ.. ನೀನು ಆ ಪುಸ್ತಕವನ್ನು ಬರೆಯಲೇ ಬೇಕು.. ನಾವು ಅದನ್ನು ಓದಲೇ ಬೇಕು.. ನೀನು ಅದೇನು ಮಾಡ್ತೀಯೋ ಗೊತ್ತಿಲ್ಲ.. ಬೇಗ ಬರೆದು ನನಗೆ ಕೊಡಪ್ಪ.. ಇದೆ ನೀನು ಕೊಡುವ ಗುರುದಕ್ಷಿಣೆ" ಎಂದಾಗ ವಿಧಿಯಿಲ್ಲದೇ ಹೂಂ ಅಂತ ತಲೆ ಅಲ್ಲಾಡಿಸಿದೆ..
ಅಪ್ಪನ ಬಗ್ಗೆ ಬರೆಯಬೇಕು.. ಆದರೆ ಎಲ್ಲಿಂದ ಶುರುಮಾಡಬೇಕು ಎಂದು ಅಂದುಕೊಂಡಾಗ.. ನನಗೆ ಇಷ್ಟವಾಗುತ್ತಿದ್ದದು ಅವರ ಮೌನ... ಮೌನಕ್ಕೆ ಆ ಶಕ್ತಿಯಿದೆ ಎಂದು ಅರಿವಾಗಿದ್ದೆ ಅವರನ್ನು ನೋಡಿ..
ಒಂದು ದಿನವೂ ಕೂಡ ನೀವು ಹೀಗಿರಬೇಕು, ಹೀಗೆ ನೆಡೆದುಕೊಳ್ಳಬೇಕು ಎಂದು ಹೇಳಿದ್ದು ನೆನಪಿಲ್ಲ.. ಸದ್ದಿಲ್ಲದೇ ಅವರ ನೆಡೆವಳಿಕೆಯನ್ನು ಅನುಸರಿಸುವ ಮಾರ್ಗವನ್ನು ತೆರೆದಿಟ್ಟರು..
ಹಾಗಾಗಿ ಅವರ ಜೀವನವನ್ನು ಅಕ್ಷರದಲ್ಲಿ ಹಿಡಿದಿಡಬೇಕು ಎಂದು ನಿರ್ಧಾರ ಮಾಡಿದಾಗ ಮೂಡಿದ ಹೆಸರೇ "ಮಂಜಲ್ಲಿ ಮಂಜಾದ ಮಂಜು"
ಸಾಧ್ಯವಾದಷ್ಟು ಬೇಗ.. ಈ ಪ್ರತಿ ಹೊರಗೆ ತರಬೇಕೆಂಬ ಕಾತುರ ನನಗೂ ಇದೆ.. ಮಾತುಗಳನ್ನು ಗೆದ್ದ ಮೌನದ ಬಗ್ಗೆ ಬರೆಯುವಾಗ ಒಂದಷ್ಟು ಮೌನದ ಆಸರೆಯೂ ಬೇಕಲ್ಲವೇ.. !!!